ಬೆಳಗ್ಗೆ 6ರಿಂದಲೇ ‘ಟಾಕ್ಸಿಕ್’ ಸಿನಿಮಾ ಅಬ್ಬರ; ಯಶ್ ಚಿತ್ರಕ್ಕೆ ಭರ್ಜರಿ ಕ್ರೇಜ್
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಶೋ ಆರಂಭವಾಗಿದೆ. ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ.

‘ಕೆಜಿಎಫ್: ಚಾಪ್ಟರ್ 2’ ನಂತರ ಯಶ್ ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿದ್ದ ‘ಟಾಕ್ಸಿಕ್’ (Toxic) ಸಿನಿಮಾ ಇದೀಗ ದೊಡ್ಡ ಪರದೆಗೆ ಬಂದಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದ ಬಗ್ಗೆ ಬಿಡುಗಡೆಯ ಮುನ್ನವೇ ಭಾರಿ ನಿರೀಕ್ಷೆ ನಿರ್ಮಾಣವಾಗಿತ್ತು. ಇದೀಗ ಸಿನಿಮಾ ವಿಶ್ವದಾದ್ಯಂತ ಪ್ರೇಕ್ಷಕರನ್ನು ತಲುಪಿದೆ.
ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಯ ದಿನವೇ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಬೆಂಗಳೂರಿನ ಸೇರಿದಂತೆ ಹಲವು ನಗರಗಳ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ವಿಶೇಷ ಪ್ರದರ್ಶನಗಳು ಆರಂಭವಾಗಿವೆ. ಮೊದಲ ದಿನದ ಮೊದಲ ಶೋ (First Day First Show) ನೋಡಲು ಅಭಿಮಾನಿಗಳು ಮುಂಜಾನೆಯಲ್ಲೇ ಚಿತ್ರಮಂದಿರಗಳತ್ತ ತೆರಳಿದ್ದಾರೆ. ಹಲವೆಡೆ ಯಶ್ ಅವರ ಬೃಹತ್ ಕಟೌಟ್‌ಗಳು (Yash Cutout) ಗಮನ ಸೆಳೆಯುತ್ತಿವೆ.
‘ಟಾಕ್ಸಿಕ್’ ಚಿತ್ರದಲ್ಲಿ ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ನಯನತಾರಾ ಮತ್ತು ಹುಮಾ ಖುರೇಷಿ ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರ ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿ ಬಿಡುಗಡೆಯಾಗಿದ್ದು, ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆ ಚಿತ್ರರಂಗದಲ್ಲಿದೆ.
ಇದೇ ವೇಳೆ ಸಿನಿಮಾ ಬಿಡುಗಡೆಗೂ ಮುನ್ನ ಯಶ್ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದರು. ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುವಾಗ ಯಾವುದೇ ದೃಶ್ಯಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ. ಸಿನಿಮಾದ ಅನುಭವವನ್ನು ಪ್ರೇಕ್ಷಕರು ದೊಡ್ಡ ಪರದೆಯಲ್ಲೇ ಸಂಪೂರ್ಣವಾಗಿ ಆನಂದಿಸಬೇಕು ಎಂಬುದು ಅವರ ಮನವಿಯ ಹಿಂದಿನ ಉದ್ದೇಶ.
ಇನ್ನೊಂದೆಡೆ, ‘ಟಾಕ್ಸಿಕ್’ ಹಿಂದಿ ಆವೃತ್ತಿಯ ಸೆನ್ಸಾರ್ ಪ್ರಕ್ರಿಯೆ ಕೊನೆಯ ಹಂತದಲ್ಲಿ ಪೂರ್ಣಗೊಂಡಿದೆ. ಸೆನ್ಸಾರ್ ಮಂಡಳಿಯು ಕೆಲವು ಸಂಭಾಷಣೆಗಳು ಮತ್ತು ಡ್ರಗ್ಸ್‌ಗೆ ಸಂಬಂಧಿಸಿದ ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಕೆಲವು ಬದಲಾವಣೆ ಹಾಗೂ ಕಟ್‌ಗಳನ್ನು ಸೂಚಿಸಿದೆ. ಬಳಿಕ ಹಿಂದಿ ವರ್ಷನ್‌ಗೆ ‘ಎ’ ಪ್ರಮಾಣಪತ್ರ ನೀಡಲಾಗಿದೆ.
ಬಿಡುಗಡೆಯ ಮೊದಲ ದಿನವೇ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಇದೀಗ ಎಲ್ಲರ ಗಮನ ಸೆಳೆದಿದೆ. ಯಶ್ ಅವರ ಹಿಂದಿನ ಸಿನಿಮಾಗಳಂತೆ ‘ಟಾಕ್ಸಿಕ್’ ಕೂಡ ಬಾಕ್ಸ್ ಆಫೀಸ್‌ನಲ್ಲಿ (Box Office) ದೊಡ್ಡ ದಾಖಲೆ ಬರೆಯುತ್ತದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.


