Singeetam Srinivasa Rao: ಖ್ಯಾತ ಚಲನಚಿತ್ರ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ
Singeetam Srinivasa Rao: ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ 60ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದ ಸಿಂಗೀತಂ ಶ್ರೀನಿವಾಸ ರಾವ್, 95ನೇ ವಯಸ್ಸಿನಲ್ಲಿ ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಚಿತ್ರರಂಗದಲ್ಲಿ ದುಃಖ ಆವರಿಸಿದೆ.
- ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನ
- ಕನ್ನಡದ ಹಲವು ಸೂಪರ್‌ಹಿಟ್ ಸಿನಿಮಾಗಳ ನಿರ್ದೇಶಕ
- ಡಾ. ರಾಜ್‌ಕುಮಾರ್ ಜೊತೆ ಹಲವು ಸಿನಿಮಾ ನಿರ್ದೇಶಿಸಿದ್ದರು
ಬೆಂಗಳೂರು, ಅಕ್ಟೋಬರ್ 04: ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ (Singeetam Srinivasa Rao) ಅವರು 95ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ (Death). ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ರಾತ್ರಿ 10.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಕನ್ನಡ (Kannada Cinema) ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲೂ ಸಿಂಗೀತಂ ಶ್ರೀನಿವಾಸ ರಾವ್ ತಮ್ಮದೇ ಛಾಪು ಮೂಡಿಸಿದ್ದರು. 60ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದ (Director) ಅವರು, ವಿಭಿನ್ನ ಕಥೆ ಮತ್ತು ಪ್ರಯೋಗಾತ್ಮಕ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.
ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್‌ಕುಮಾರ್ (Dr. Rajkumar) ಅವರ ಹಲವು ಜನಪ್ರಿಯ ಸಿನಿಮಾಗಳಿಗೆ ನಿರ್ದೇಶನ ನೀಡಿದ್ದ ಸಿಂಗೀತಂ, ಚಲಿಸುವ ಮೋಡಗಳು, ಹಾಲು ಜೇನು, ಭಾಗ್ಯದ ಲಕ್ಷ್ಮೀ ಬಾರಮ್ಮ, ಎರಡು ನಕ್ಷತ್ರಗಳು, ಶ್ರಾವಣ ಬಂತು ಮತ್ತು ಶ್ರುತಿ ಸೇರಿದಾಗ ಸೇರಿದಂತೆ ಹಲವು ಚಿತ್ರಗಳನ್ನು ನೀಡಿದ್ದಾರೆ.
1988ರಲ್ಲಿ ಮೂಕಚಿತ್ರದ ಶೈಲಿಯಲ್ಲಿ ಸಂಭಾಷಣೆ ಇಲ್ಲದೆ ಮೂಡಿಬಂದ ಪುಷ್ಪಕ ವಿಮಾನ (Pushpaka Vimana) ಸಿನಿಮಾ ಮೂಲಕವೂ ಅವರು ದೊಡ್ಡ ಮೆಚ್ಚುಗೆ ಪಡೆದಿದ್ದರು. ಶಿವರಾಜ್‌ಕುಮಾರ್ (Shivarajkumar) ಅವರನ್ನು ಆನಂದ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿಯೂ ಸಿಂಗೀತಂ ಅವರಿಗಿದೆ.
ಪುಷ್ಪಕ ವಿಮಾನಂ, ಆದಿತ್ಯ 369, ಭೈರವ ದ್ವೀಪಂ ಸೇರಿದಂತೆ ಹಲವು ಗಮನಾರ್ಹ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಅಭಿನಯದ ಚಿರಂಜೀವಿ ಸುಧಾಕರ್ ಹಾಗೂ ಜಗ್ಗೇಶ್ ಅಭಿನಯದ ಮೇಕಪ್ ಸಿನಿಮಾಗಳಿಗೂ ಅವರು ನಿರ್ದೇಶನ ನೀಡಿದ್ದರು.
ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಸಿಂಗೀತಂ ಶ್ರೀನಿವಾಸ ರಾವ್ ಅವರಿಗೆ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ನಂದಿ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿದ್ದವು.
1931ರ ಸೆಪ್ಟೆಂಬರ್ 21ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಉದಯಗಿರಿಯಲ್ಲಿ ಜನಿಸಿದ ಸಿಂಗೀತಂ, ತಮ್ಮ 95ನೇ ವಯಸ್ಸಿನಲ್ಲೂ ಗೀತಂ ಸಿನಿಮಾವನ್ನು ನಿರ್ದೇಶಿಸಿ ಗಮನ ಸೆಳೆದಿದ್ದರು. ಅವರ ನಿಧನದಿಂದ ಭಾರತೀಯ ಚಿತ್ರರಂಗದ ಹಿರಿಯ ಹಾಗೂ ಪ್ರಯೋಗಶೀಲ ನಿರ್ದೇಶಕರೊಬ್ಬರನ್ನು ಕಳೆದುಕೊಂಡಂತಾಗಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.





