Mobile Charger: ಮೊಬೈಲ್ ಚಾರ್ಜರ್ ನಕಲಿಯಾ? ಒರಿಜಿನಲಾ? ಹೀಗೆ ಸುಲಭವಾಗಿ ಗುರುತಿಸಿ
Mobile Charger: ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ನಕಲಿ ಮೊಬೈಲ್ ಚಾರ್ಜರ್‌ಗಳಿಂದ ಬ್ಯಾಟರಿ ಹಾನಿ ಮತ್ತು ಅಪಾಯ ಸಂಭವಿಸಬಹುದು, ಸರಳ ಪರೀಕ್ಷೆಗಳ ಮೂಲಕ ಒರಿಜಿನಲ್ ಹಾಗೂ ಫೇಕ್ ಚಾರ್ಜರ್ ಗುರುತಿಸಿ ನಿಮ್ಮ ಫೋನ್ ಸುರಕ್ಷಿತವಾಗಿರಿಸಲು ತಜ್ಞರು ಸಲಹೆ ನೀಡಿದ್ದಾರೆ.

Mobile Charger: ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಮೊಬೈಲ್ ಚಾರ್ಜರ್‌ಗಳು ತುಂಬಾ ಕಂಡು ಬರುತ್ತಿವೆ. ಹೊರಗೆ ನೋಡಲು ಬ್ರಾಂಡ್‌ನಂತೆ ಕಾಣಿಸಿದರೂ ಒಳಗೆ ಗುಣಮಟ್ಟ ಕಡಿಮೆ ಭಾಗಗಳನ್ನು ಬಳಸಿರುತ್ತಾರೆ. ಇವು ಫೋನ್ ಬ್ಯಾಟರಿಗೆ ಹಾನಿ ಮಾಡುವುದು ಮಾತ್ರವಲ್ಲ, ಕೆಲವೊಮ್ಮೆ ಬಿಸಿ ಏರಿ ಅಪಘಾತಕ್ಕೂ ಕಾರಣವಾಗಬಹುದು.
ಬಹಳಷ್ಟು ಜನ ಹಣ ಉಳಿಸೋಕೆ ಕಡಿಮೆ ದರದ ಚಾರ್ಜರ್ ಖರೀದಿಸುತ್ತಾರೆ. ಆದರೆ ಈ ಸಣ್ಣ ನಿರ್ಲಕ್ಷ್ಯ ದೊಡ್ಡ ಸಮಸ್ಯೆ ತರಬಹುದು ಎಂದು ಟೆಕ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಪ್ಯಾಕೇಜಿಂಗ್ ನೋಡಿ ಮೊದಲ ಸುಳಿವು
ಒರಿಜಿನಲ್ ಚಾರ್ಜರ್ ಸಾಮಾನ್ಯವಾಗಿ ಗಟ್ಟಿಯಾದ ಬಾಕ್ಸ್, ಸ್ಪಷ್ಟ ಲೋಗೋ ಮತ್ತು ಕಂಪನಿ ಸೀಲ್ ಜೊತೆಗೆ ಬರುತ್ತದೆ. ಮುದ್ರಣ ಕ್ಲೀನ್ ಆಗಿರುತ್ತದೆ. ಮಸಕಾದ ಅಕ್ಷರಗಳು, ತಪ್ಪಾದ ಸ್ಪೆಲ್ಲಿಂಗ್, ಲೈಟ್ ಪ್ಯಾಕಿಂಗ್ ಇದ್ದರೆ ಅದು ನಕಲಿ ಆಗಿರುವ ಸಾಧ್ಯತೆ ಹೆಚ್ಚು.
ಚಾರ್ಜರ್ ಮೇಲೆ Model number, Voltage, ISI/BIS ಗುರುತು, ಕಂಪನಿ ಹೆಸರು ಸ್ಪಷ್ಟವಾಗಿ ಮುದ್ರಿತವಾಗಿರಬೇಕು. ಇವು ಇಲ್ಲದಿದ್ದರೆ ಖರೀದಿ ಮಾಡದೇ ಇರುವುದು ಉತ್ತಮ.
ತೂಕ ಮತ್ತು ಬೆಲೆ ಕೂಡ ಹೇಳುತ್ತವೆ ಸತ್ಯ
ಒರಿಜಿನಲ್ ಚಾರ್ಜರ್ ಒಳಗೆ ಉತ್ತಮ ಟ್ರಾನ್ಸ್‌ಫಾರ್ಮರ್ ಇರುವುದರಿಂದ ಸ್ವಲ್ಪ ಭಾರವಾಗಿರುತ್ತದೆ. ನಕಲಿ ಚಾರ್ಜರ್ ಕೈಗೆ ಹಿಡಿದರೆ ತುಂಬಾ ಹಗುರವಾಗಿ ಅನುಭವವಾಗುತ್ತದೆ.
ಹಾಗೆಯೇ, ₹1,000 ಬೆಲೆಯ ಬ್ರಾಂಡೆಡ್ ಚಾರ್ಜರ್ ₹200–₹300ಕ್ಕೆ ಸಿಗುತ್ತಿದ್ದರೆ ಅದು ಬಹುತೇಕ ಫೇಕ್. ಅತಿಯಾದ ಕಡಿಮೆ ಬೆಲೆ ಎಂದರೆ ಎಚ್ಚರಿಕೆ ಗಂಟೆ ಹೊಡೆಯಬೇಕು.
ಚಾರ್ಜಿಂಗ್ ವೇಳೆ ಗಮನಿಸಿ
ನಕಲಿ ಚಾರ್ಜರ್ ಬಳಸಿದರೆ ಫೋನ್ ನಿಧಾನವಾಗಿ ಚಾರ್ಜ್ ಆಗುತ್ತದೆ ಅಥವಾ ಬೇಗ ಬಿಸಿ ಆಗುತ್ತದೆ. ಕೆಲವೊಮ್ಮೆ ಬ್ಯಾಟರಿ ಲೈಫ್ ಕೂಡ ಕಡಿಮೆಯಾಗುತ್ತದೆ. ಒರಿಜಿನಲ್ ಚಾರ್ಜರ್‌ನಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸೋದಿಲ್ಲ.
ಸಣ್ಣ ಪರಿಶೀಲನೆ ಮಾಡಿದರೆ ನಿಮ್ಮ ಫೋನ್ ಮತ್ತು ನಿಮ್ಮ ಸುರಕ್ಷತೆ ಎರಡನ್ನೂ ಕಾಪಾಡಬಹುದು.



