Laptop: ನಿಮ್ಮ ಲ್ಯಾಪ್‌ಟಾಪ್‌ ಹ್ಯಾಂಗ್ ಆಗ್ತಿದೆಯಾ? ಸ್ಲೋ ಸಿಸ್ಟಮ್‌ಗೆ ಇಲ್ಲಿದೆ ಸ್ಮಾರ್ಟ್ ಪರಿಹಾರ

ಹಳೆಯ ಲ್ಯಾಪ್‌ಟಾಪ್ ಅಥವಾ ಪಿಸಿ ನಿಧಾನವಾಗಿ ಕೆಲಸ ಮಾಡುತ್ತಿದ್ದರೆ ಖರ್ಚು ಬೇಡ, ಉಚಿತ ChromeOS Flex ಇನ್‌ಸ್ಟಾಲ್ ಮಾಡಿ ವೇಗ ಹೆಚ್ಚಿಸಬಹುದು, ಕೆಲವೇ ಹಂತಗಳಲ್ಲಿ ಸಿಸ್ಟಮ್ ಹೊಸದಂತೆ ಕಾರ್ಯನಿರ್ವಹಿಸುತ್ತದೆ.

Laptop: ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ನಿಧಾನವಾಗಿ ಕೆಲಸ ಮಾಡುತ್ತಿದೆಯೆಂದರೆ ಹಲವರು ಹೊಸ ಸಾಧನ ಖರೀದಿಸಲು ಯೋಚಿಸುತ್ತಾರೆ. ಆದರೆ ಸ್ವಲ್ಪ ಜಾಗ್ರತೆ ತೆಗೆದುಕೊಂಡರೆ ಹಳೆಯದಕ್ಕೂ ಹೊಸ ಜೀವ ಕೊಡಬಹುದು. ವಿಶೇಷವಾಗಿ ವಿದ್ಯಾರ್ಥಿಗಳು, ಕಚೇರಿ ಕೆಲಸ ಮಾಡುವವರು, ಮನೆ ಬಳಕೆದಾರರಿಗೆ ಇದು ಉಪಯುಕ್ತ ಪರಿಹಾರವಾಗಿದೆ.

Google ನೀಡುವ ChromeOS Flex ಎಂಬ ಉಚಿತ ಆಪರೇಟಿಂಗ್ ಸಿಸ್ಟಮ್ ಹಳೆಯ ಹಾರ್ಡ್‌ವೇರ್‌ಗಳಲ್ಲೂ ಚೆನ್ನಾಗಿ ಕೆಲಸ ಮಾಡುತ್ತದೆ. ಕಡಿಮೆ ಮೆಮೊರಿ ಇದ್ದರೂ ವೇಗವಾಗಿ ಬೂಟ್ ಆಗಿ, ಬ್ರೌಸಿಂಗ್, ಡಾಕ್ಯುಮೆಂಟ್ ಕೆಲಸಗಳು, ಆನ್‌ಲೈನ್ ಕ್ಲಾಸ್‌ಗಳಿಗೆ ಸುಲಭವಾಗಿ ಬಳಸಬಹುದು.

USB ಮೂಲಕ ಇನ್‌ಸ್ಟಾಲ್ ಮಾಡುವುದು ಹೇಗೆ?

ಮೊದಲು ಒಂದು ಖಾಲಿ USB ಡ್ರೈವ್ ಅಥವಾ SD ಕಾರ್ಡ್ ಬೇಕಾಗುತ್ತದೆ. ಅದನ್ನು ಕೆಲಸ ಮಾಡುತ್ತಿರುವ ಇನ್ನೊಂದು ಲ್ಯಾಪ್‌ಟಾಪ್ ಅಥವಾ ಪಿಸಿಗೆ ಜೋಡಿಸಿ. ಬ್ರೌಸರ್‌ನಲ್ಲಿ “Chromebook Recovery Utility” ಎಕ್ಸ್ಟೆನ್ಷನ್ ಅನ್ನು ಇನ್‌ಸ್ಟಾಲ್ ಮಾಡಿ.

ಅದನ್ನು ತೆರೆಯುವ ಮೂಲಕ Google ChromeOS Flex ಆಯ್ಕೆ ಮಾಡಿ, ನಿಮ್ಮ USB ಡ್ರೈವ್‌ಗೆ ಫ್ಲ್ಯಾಶ್ ಮಾಡಿ. ಗಮನಿಸಿ – ಫ್ಲ್ಯಾಶ್ ಮಾಡುವಾಗ ಡ್ರೈವ್‌ನಲ್ಲಿರುವ ಎಲ್ಲಾ ಡೇಟಾ ಅಳಿಸಿಬಿಡುತ್ತದೆ.

USB ಸಿದ್ಧವಾದ ನಂತರ ಅದನ್ನು ಹಳೆಯ ಲ್ಯಾಪ್‌ಟಾಪ್‌ಗೆ ಹಾಕಿ, ಪವರ್ ಆನ್ ಮಾಡುವಾಗ Boot Menu (ಸಾಮಾನ್ಯವಾಗಿ F12 ಅಥವಾ ಬೇರೆ ಕೀ) ಮೂಲಕ USB ಆಯ್ಕೆ ಮಾಡಿ. ಕೆಲವು ನಿಮಿಷಗಳಲ್ಲಿ ChromeOS Flex ಇನ್‌ಸ್ಟಾಲ್ ಆಗುತ್ತದೆ.

ಬಳಕೆದಾರರಿಗೆ ಲಾಭ ಏನು?

ಇನ್‌ಸ್ಟಾಲ್ ಆದ ನಂತರ ಸಿಸ್ಟಮ್ ವೇಗವಾಗಿ ಓಪನ್ ಆಗುತ್ತದೆ, ಹ್ಯಾಂಗ್ ಸಮಸ್ಯೆ ಕಡಿಮೆಯಾಗುತ್ತದೆ. ಇಂಟರ್ನೆಟ್ ಬ್ರೌಸಿಂಗ್, ಯೂಟ್ಯೂಬ್, ಆಫೀಸ್ ಕೆಲಸಗಳು ಸುಲಭವಾಗುತ್ತವೆ. ಹಳೆಯ ಲ್ಯಾಪ್‌ಟಾಪ್ ಕೂಡ ಹೊಸದಂತ ಅನುಭವ ಕೊಡುತ್ತದೆ. ಹಣ ಖರ್ಚು ಮಾಡದೆ ಉತ್ತಮ ಪರ್ಯಾಯ ಸಿಗುತ್ತದೆ ಎಂಬುದು ಪ್ರಮುಖ ಲಾಭ.

Related Stories