ನಟಿ ರಮ್ಯಾಗೆ ಅಶ್ಲೀಲ ಸಂದೇಶ ಪ್ರಕರಣ, ವಿಜಯಪುರದ 6ನೇ ಆರೋಪಿ ಬಂಧನ - Actress Ramya
ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಮತ್ತು ಸಂದೇಶ ಪ್ರಕರಣದಲ್ಲಿ ವಿಜಯಪುರದ ಆರೋಪಿ ಸಂತೋಷ್ ಬಂಧನ. ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸಿ ಈಗಾಗಲೇ ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
- ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಪ್ರಕರಣ
- ಸಿಸಿಬಿ ಪೊಲೀಸರು ವಿಜಯಪುರದ ಆರೋಪಿ ಬಂಧನ
- ಪ್ರಕರಣದಲ್ಲಿ ಒಟ್ಟು ಆರು ಮಂದಿ ವಶ
ಬೆಂಗಳೂರು (Bengaluru): ನಟಿ ರಮ್ಯಾಗೆ (Actress Ramya) ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಹಾಗೂ ಸಂದೇಶ ಕಳುಹಿಸಿದ್ದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಿಸಿಬಿ ಸೈಬರ್ ಕ್ರೈಮ್ ವಿಭಾಗದ ತಂಡ ವಿಜಯಪುರ ಮೂಲದ ಸಂತೋಷ್ ಎಂಬಾತನನ್ನು ಬಂಧಿಸಿದೆ.
ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಈಗ ಆರಕ್ಕೇರಿದೆ. ಇದಕ್ಕೂ ಮೊದಲು ಓಬಣ್ಣ, ಗಂಗಾಧರ್, ರಾಜೇಶ್, ಭುವನ್‌ಗೌಡ ಹಾಗೂ ಮಂಜುನಾಥ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಪೊಲೀಸರ ಪ್ರಕಾರ, ವಿಜಯಪುರದಲ್ಲಿ (Vijayapura) ಗಾರೆ ಕೆಲಸ ಮಾಡುತ್ತಿದ್ದ ಸಂತೋಷ್, ಸಾಮಾಜಿಕ ಜಾಲತಾಣದ ಖಾತೆಯಿಂದ ನಟಿ ರಮ್ಯಾಗೆ ಅಶ್ಲೀಲ ಪದ ಬಳಸಿ ಸಂದೇಶ ಕಳುಹಿಸಿದ್ದಾನೆ. ತನಿಖೆ ನಡೆಸಿದ ಅಧಿಕಾರಿಗಳು ಖಾತೆಯ ಐಪಿ ವಿಳಾಸ ಪತ್ತೆಹಚ್ಚಿ, ಅವನನ್ನು ಹಿಡಿದಿದ್ದಾರೆ.
ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಪರಿಶೀಲನೆ ಶುರು! 12.69 ಲಕ್ಷ ಪಡಿತರ ಚೀಟಿಗಳ ವಿರುದ್ಧ ಕ್ರಮ
ಜುಲೈ 28ರಂದು, ನಟ ದರ್ಶನ್ ಅವರ ಅಭಿಮಾನಿಗಳೆಂದು ಹೇಳಿಕೊಂಡು ಅಶ್ಲೀಲ ಕಾಮೆಂಟ್ ಹಾಗೂ ಸಂದೇಶ ಕಳುಹಿಸುತ್ತಿದ್ದವರ ವಿರುದ್ಧ ರಮ್ಯಾ ಸ್ವತಃ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಹಾಗೂ ಸೈಬರ್ ಕ್ರೈಮ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಅದರಂತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಕ್ರಿಮಿನಲ್ ಬೆದರಿಕೆ, ಶಾಂತಿಭಂಗದ ಯತ್ನ, ಲೈಂಗಿಕ ಕಿರುಕುಳ, ಲೈಂಗಿಕ ಟೀಕೆ ಹಾಗೂ ಮಹಿಳೆಯ ಗೌರವಕ್ಕೆ ಧಕ್ಕೆ ಎಂಬ ಆರೋಪಗಳು ಸೇರಿವೆ.
ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ತಾವು ಮಾಡಿದ್ದ ಪೋಸ್ಟ್‌ಗೇ ಪ್ರತಿಕ್ರಿಯೆಯಾಗಿ ಕೆಲವರು ಅಶ್ಲೀಲ ಮೆಸೇಜ್ ಕಳುಹಿಸಿದ್ದನ್ನು ಖಂಡಿಸಿದ್ದರು. “ಇಂತಹ ವರ್ತನೆ ಸಮಾಜಕ್ಕೆ ಹಾನಿಕಾರಕ. ಹಾಗಾದರೆ ನೀವು ಮಾಡಿದ ಮೆಸೇಜ್ ಮತ್ತು ರೇಣುಕಾಸ್ವಾಮಿ ಮಾಡಿದ ಮೆಸೇಜ್‌ಗೆ ಏನು ವ್ಯತ್ಯಾಸ?” ಎಂದು ಅವರು ಕಿಡಿಕಾರಿದ್ದರು.
6th Arrest in Obscene Messages Case to Actress Ramya



