ನಟ ದರ್ಶನ್ ಕೇಸ್‌ಗೆ ಬಿಗ್ ಟ್ವಿಸ್ಟ್: ಪ್ರದೋಷ್ ಮಾಫಿ ಸಾಕ್ಷಿಯಾಗಲು ಕೋರ್ಟ್ ಅಸ್ತು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ14 ಆರೋಪಿ ಪ್ರದೋಷ್‌ಗೆ ಮಾಫಿ ಸಾಕ್ಷಿಯಾಗಲು ಕೋರ್ಟ್ ಒಪ್ಪಿಗೆ ನೀಡಿದ್ದು, ಸತ್ಯಾಂಶಗಳನ್ನು ಬಹಿರಂಗಪಡಿಸುವ ಅವರ ಹೇಳಿಕೆಗಳು ಮುಂದಿನ ತನಿಖೆ ಮತ್ತು ವಿಚಾರಣೆಗೆ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ.

ಬೆಂಗಳೂರು: ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಆರೋಪಿಗಳು ಎದುರಿಸುತ್ತಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಎ14 ಆರೋಪಿ ಪ್ರದೋಷ್ ಎಸ್. ರಾವ್ (Pradosh) ಸಲ್ಲಿಸಿದ್ದ ಮಾಫಿ ಸಾಕ್ಷಿ (Approver) ಅರ್ಜಿಯನ್ನು 59ನೇ ಸಿಸಿಹೆಚ್ ನ್ಯಾಯಾಲಯ ಅಂಗೀಕರಿಸಿದೆ. ಆಗಸ್ಟ್ 25ರಂದು ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಈ ಕುರಿತು ಆದೇಶ ನೀಡಿದ್ದಾರೆ.
ಮಾಫಿ ಸಾಕ್ಷಿಯಾಗಲು ಪ್ರದೋಷ್ ಮುಂದಾಗಿರುವುದರಿಂದ ಪ್ರಕರಣದ ಮುಂದಿನ ವಿಚಾರಣೆಯ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಘಟನೆ ನಡೆದ ದಿನದಿಂದ ಹಿಡಿದು ಅಪಹರಣ ಹಾಗೂ ಕೊಲೆಗೆ ಸಂಬಂಧಿಸಿದ ಹಲವು ವಿಚಾರಗಳು ಅವರ ಗಮನಕ್ಕೆ ಬಂದಿರಬಹುದು ಎಂಬ ಹಿನ್ನೆಲೆಯಲ್ಲಿ ಅವರ ಹೇಳಿಕೆಗೆ ಮಹತ್ವ ಸಿಕ್ಕಿದೆ.
ಈ ನಡುವೆ ಕೋರ್ಟ್ ಪ್ರದೋಷ್‌ಗೆ ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಿದೆ. ಮಾಫಿ ಸಾಕ್ಷಿಯ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅವರು ಜೈಲಿನಲ್ಲೇ ಇರಬೇಕು. ಜೊತೆಗೆ ತಮ್ಮ ಗಮನಕ್ಕೆ ಬಂದಿರುವ ಸತ್ಯಾಂಶಗಳನ್ನು ಸಂಪೂರ್ಣವಾಗಿ ನ್ಯಾಯಾಲಯದ ಮುಂದೆ ಹೇಳಬೇಕು ಎಂದು ಸೂಚಿಸಲಾಗಿದೆ.
ಈಗಾಗಲೇ ನ್ಯಾಯಾಲಯ ಪ್ರದೋಷ್‌ಗೆ ಹಲವು ಪ್ರಶ್ನೆಗಳನ್ನು ಕೇಳಿ ಅವರ ಉತ್ತರಗಳನ್ನು ದಾಖಲಿಸಿಕೊಂಡಿದೆ. ಮಾಫಿ ಸಾಕ್ಷಿಯಾಗುವ ನಿರ್ಧಾರಕ್ಕೆ ಯಾರಿಂದಲೂ ಪ್ರಭಾವ, ಒತ್ತಡ ಅಥವಾ ಬಲವಂತ ಇರಲಿಲ್ಲ ಎಂದು ಪ್ರದೋಷ್ ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ.
ಸತ್ಯ ಮುಚ್ಚಿಟ್ಟರೆ ಮತ್ತೆ ಆರೋಪಿಯಾಗುವ ಎಚ್ಚರಿಕೆ
ಪ್ರದೋಷ್ ತಮ್ಮ ಬಳಿ ಇರುವ ನಿಜವಾದ ಮಾಹಿತಿಯನ್ನು ಮುಚ್ಚಿಡದೆ ಬಹಿರಂಗಪಡಿಸಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಒಂದು ವೇಳೆ ಅವರು ಉದ್ದೇಶಪೂರ್ವಕವಾಗಿ ಸತ್ಯವನ್ನು ಮರೆಮಾಚಿದರೆ ಅಥವಾ ಸುಳ್ಳು ಸಾಕ್ಷ್ಯ ನೀಡಿದರೆ, ಮಾಫಿ ಸಾಕ್ಷಿಯ ಸ್ಥಾನಮಾನವನ್ನು ರದ್ದುಪಡಿಸಿ ಮತ್ತೆ ಆರೋಪಿಯನ್ನಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಎಚ್ಚರಿಸಿದೆ.
ಕೋರ್ಟ್ ಆದೇಶದ ಪ್ರತಿಯನ್ನು ಜೈಲು ಅಧಿಕಾರಿಗಳ ಮೂಲಕ ಪ್ರದೋಷ್‌ಗೆ ತಲುಪಿಸಲಾಗಿದೆ. ಇದೀಗ ಅವರು ನೀಡಲಿರುವ ಹೇಳಿಕೆಗಳು ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದು ಗಮನ ಸೆಳೆದಿದೆ.
ಪ್ರಕರಣದ ಪ್ರಮುಖ ಹಂತಗಳಲ್ಲಿ ಪ್ರದೋಷ್‌ಗೆ ಮಾಹಿತಿ ಅಥವಾ ನೇರ ಅರಿವು ಇದ್ದರೆ, ಅವರ ಸಾಕ್ಷ್ಯ (Witness Statement) ವಿಚಾರಣೆಗೆ ನಿರ್ಣಾಯಕವಾಗಬಹುದು. ಆದರೆ ಅಂತಿಮವಾಗಿ ಅವರ ಹೇಳಿಕೆಗಳನ್ನು ನ್ಯಾಯಾಲಯ ಯಾವ ರೀತಿಯಲ್ಲಿ ಪರಿಗಣಿಸುತ್ತದೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿವೆ.
ಮಾಫಿ ಸಾಕ್ಷಿಯ ವಿಚಾರಣಾ ಪ್ರಕ್ರಿಯೆ ಇದೀಗ ಆರಂಭವಾಗಿರುವುದರಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವದ ಮಾಹಿತಿ ಹೊರಬರುವ ಸಾಧ್ಯತೆ ಇದೆ. ಪ್ರದೋಷ್ ನೀಡುವ ಹೇಳಿಕೆಗಳತ್ತ ಇದೀಗ ದರ್ಶನ್ ಪ್ರಕರಣದ ಎಲ್ಲರ ಗಮನ ನೆಟ್ಟಿದೆ.



