ಪವಿತ್ರಾ ಗೌಡ ಮನೆ ಊಟಕ್ಕೆ ಬ್ರೇಕ್, ಹೈಕೋರ್ಟ್ ಕಠಿಣ ಆದೇಶ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಪವಿತ್ರಾ ಗೌಡ ಸೇರಿದಂತೆ ಆರೋಪಿಗಳಿಗೆ ಮನೆಯಿಂದ ಊಟ ತರಿಸಿಕೊಳ್ಳಲು ನೀಡಿದ್ದ ವಿಶೇಷ ಅನುಮತಿಯನ್ನು ಹೈಕೋರ್ಟ್ ರದ್ದು ಮಾಡಿದ್ದು, ಮುಂದಿನಿಂದ ಜೈಲು ಆಹಾರವೇ ಸೇವಿಸಬೇಕೆಂದು ಸ್ಪಷ್ಟಪಡಿಸಿದೆ.

  • ಪವಿತ್ರಾ ಗೌಡ ಮನೆ ಊಟಕ್ಕೆ ಬ್ರೇಕ್, ಹೈಕೋರ್ಟ್
  • ರೇಣುಕಾ ಸ್ವಾಮಿ ಕೊಲೆ ಆರೋಪಿಗಳಿಗೆ ಸೂಚನೆ
  • ಪರಪ್ಪನ ಅಗ್ರಹಾರ ಜೈಲು ಆಹಾರವೇ ಸೇವಿಸಬೇಕು

ಬೆಂಗಳೂರು (Bengaluru): ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪವಿತ್ರಾ ಗೌಡ (Pavithra Gowda) ಅವರಿಗೆ ಹೈಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆ ಎದುರಾಗಿದೆ. ಜೈಲಿನಲ್ಲಿದ್ದರೂ ವಿಶೇಷ ಅನುಮತಿಯ ಮೂಲಕ ಮನೆಯಿಂದ ಊಟ ತರಿಸಿಕೊಳ್ಳುತ್ತಿದ್ದ ವ್ಯವಸ್ಥೆಗೆ ಇದೀಗ ಹೈಕೋರ್ಟ್ ಸಂಪೂರ್ಣ ಬ್ರೇಕ್ ಹಾಕಿದೆ.

ಇದರೊಂದಿಗೆ ಪವಿತ್ರಾ ಗೌಡ ಮಾತ್ರವಲ್ಲದೆ ಇದೇ ಪ್ರಕರಣದ ಇತರೆ ಆರೋಪಿಗಳಿಗೂ ಮನೆಯಿಂದ ಆಹಾರ ತರಿಸಿಕೊಳ್ಳುವ ಅವಕಾಶ ಇಲ್ಲದಂತಾಗಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿತರಾಗಿರುವ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್ ಅವರುಗಳು ಹಿಂದೆ ಟ್ರಯಲ್ ಕೋರ್ಟ್ ಆದೇಶದ ಆಧಾರದಲ್ಲಿ ಮನೆ ಊಟ ತರಿಸಿಕೊಳ್ಳುತ್ತಿದ್ದರು. ಕೆಲ ಸಂದರ್ಭಗಳಲ್ಲಿ ವಾರಕ್ಕೊಮ್ಮೆ ಅಥವಾ ವೈದ್ಯಕೀಯ ಕಾರಣವಿದ್ದರೆ ಆಹಾರ ತರಲು ಅವಕಾಶ ನೀಡಲಾಗಿತ್ತು.

ಟ್ರಯಲ್ ಕೋರ್ಟ್ ಆದೇಶ ರದ್ದು

ಈ ವಿಶೇಷ ಅನುಮತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು 57ನೇ ಸಿಸಿಎಚ್ ನ್ಯಾಯಾಲಯ ನೀಡಿದ್ದ ಹಿಂದಿನ ಆದೇಶವನ್ನು ರದ್ದುಪಡಿಸಿದೆ.

ನ್ಯಾಯಾಲಯ ಸ್ಪಷ್ಟಪಡಿಸಿದ್ದು, “ಆರೋಪಿ ಕೇಳಿದಂತೆಯೇ ಮನೆಯಿಂದ ಊಟ ತರಲು ಅನುಮತಿ ನೀಡಲು ಸಾಧ್ಯವಿಲ್ಲ. ವೈದ್ಯಕೀಯ ಕಾರಣವಿದ್ದರೆ ಮಾತ್ರ ವಿಶೇಷ ಅನುಮತಿ ಪರಿಗಣಿಸಬಹುದು” ಎಂದು ಸೂಚಿಸಿದೆ.

ಜೈಲು ಅಧಿಕಾರಿಗಳ ವಾದಕ್ಕೆ ಬೆಂಬಲ

ಜೈಲು ಅಧಿಕಾರಿಗಳು ಆರಂಭದಿಂದಲೂ ಮನೆಯಿಂದ ಆಹಾರ ತರಿಸುವ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಜೈಲಿನಲ್ಲೇ ಎಲ್ಲ ಕೈದಿಗಳಿಗೆ ಎಫ್‌ಎಸ್‌ಎಸ್‌ಎಐ ನಿಯಮಾನುಸಾರ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಅವರು ನ್ಯಾಯಾಲಯಕ್ಕೆ ವಿವರಿಸಿದ್ದರು.

ಜೈಲಿನ ಆಹಾರ ಸ್ವಚ್ಛ, ಆರೋಗ್ಯಕರ ಮತ್ತು ಸಮರ್ಪಕವಾಗಿದೆ. ಹೀಗಿರುವಾಗ ಕೆಲವರಿಗೆ ಮಾತ್ರ ಮನೆಯಿಂದ ಊಟ ತರಿಸಿಕೊಳ್ಳಲು ಅವಕಾಶ ನೀಡುವುದು ಸಮಂಜಸವಲ್ಲ ಎಂದು ಜೈಲು ಅಧಿಕಾರಿಗಳು ವಾದಿಸಿದ್ದರು. ಈ ವಾದವನ್ನು ಪರಿಗಣಿಸಿದ ಹೈಕೋರ್ಟ್ ಮೊದಲು ತಾತ್ಕಾಲಿಕ ತಡೆ ನೀಡಿದ್ದು, ಇದೀಗ ಅದನ್ನು ಅಂತಿಮ ಆದೇಶವಾಗಿ ಘೋಷಿಸಿದೆ.

ಪ್ರಕರಣದ ವಿಚಾರಣೆಯಲ್ಲಿ ಹೊಸ ವಾದ

ಇದಕ್ಕೆ ಸಂಬಂಧಿಸಿದಂತೆ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಇತ್ತೀಚೆಗೆ ಕೆಲವು ಪ್ರಮುಖ ವಾದಗಳೂ ಕೇಳಿಬಂದಿವೆ. ಎ3 ಆರೋಪಿಯ ಪರ ವಕೀಲರು ತನಿಖೆ ನಡೆಸಿದ ಪೊಲೀಸ್ ಅಧಿಕಾರಿಯನ್ನೇ ಆರೋಪಿಯನ್ನಾಗಿ ಮಾಡಲು ಸಲ್ಲಿಸಿದ ಅರ್ಜಿಯನ್ನು “ಹಾಸ್ಯಾಸ್ಪದ” ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ, ತನಿಖಾಧಿಕಾರಿ ಸಾಕ್ಷ್ಯಗಳನ್ನು ತಿದ್ದಿದ್ದರೆ ಅಥವಾ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದರೆ ವಿಚಾರಣೆ ವೇಳೆ ಅದಕ್ಕೆ ಉತ್ತರ ನೀಡಬೇಕಾಗುತ್ತದೆ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಲಾಯಿತು.

ಇನ್ನೊಂದೆಡೆ ದರ್ಶನ್ ಪರ ವಕೀಲರು ಪ್ರಕರಣದ ವಿಚಾರಣೆಯನ್ನು ಪ್ರತಿದಿನ ನಡೆಸುವಂತೆ ಮನವಿ ಮಾಡಿದ್ದಾರೆ. ಆದರೆ ವಿಶೇಷ ಸಾರ್ವಜನಿಕ ಅಭಿಯೋಜಕರು ಸುಪ್ರೀಂಕೋರ್ಟ್ ಮಾರ್ಗಸೂಚಿಯ ಪ್ರಕಾರ ಪ್ರತಿದಿನ ವಿಚಾರಣೆ ನಡೆಸುವುದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories