ರೇಣುಕಸ್ವಾಮಿ ಕೇಸ್: ಪ್ರದೂಷ್ ಸಾಕ್ಷ್ಯ ಪೂರ್ಣ! 6 ದಿನಗಳಲ್ಲಿ 150ಕ್ಕೂ ಅಧಿಕ ಪುಟಗಳ ಸಾಕ್ಷಿ ದಾಖಲು

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೂಷ್ ರಾವ್ ಆರು ದಿನಗಳ ವಿಚಾರಣೆಯಲ್ಲಿ 150ಕ್ಕೂ ಅಧಿಕ ಪುಟಗಳ ಸಾಕ್ಷ್ಯ ದಾಖಲಿಸಿದ್ದು, ಪ್ರಮುಖ ವಸ್ತುಗಳನ್ನು ಗುರುತಿಸಿದ್ದಾರೆ.

ಬೆಂಗಳೂರು (Bengaluru): ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಹಾಗೂ ಮಾಫಿ ಸಾಕ್ಷಿಯಾಗಿರುವ ಪ್ರದೂಷ್ ರಾವ್ (Pradosh Rao) ಅವರ ಸಾಕ್ಷ್ಯ ದಾಖಲಿಸುವ ಪ್ರಕ್ರಿಯೆ ಬುಧವಾರ ಪೂರ್ಣಗೊಂಡಿದೆ.

ಒಟ್ಟು 6 ದಿನಗಳ ಕಾಲ ನಡೆದ ವಿಚಾರಣೆಯಲ್ಲಿ ಸುಮಾರು 20 ಗಂಟೆಗಳಷ್ಟು ಸಮಯವನ್ನು ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಲು ಬಳಸಲಾಗಿದ್ದು, 150ಕ್ಕೂ ಅಧಿಕ ಪುಟಗಳ ಹೇಳಿಕೆ ದಾಖಲಾಗಿದೆ.

ನಗರದ 59ನೇ ಹೆಚ್ಚುವರಿ ಸಿಸಿಎಚ್ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಸುಜಾತಾ ಎಂ. ಸಾಂಬ್ರಾಣಿ ಅವರ ಸಮ್ಮುಖದಲ್ಲಿ ಪ್ರದೂಷ್ ಅವರ ಮಾಫಿ ಸಾಕ್ಷ್ಯ ದಾಖಲಿಸಲಾಯಿತು. ವಿಚಾರಣೆಯ ಅಂತಿಮ ದಿನ ಅವರು ಪ್ರಕರಣಕ್ಕೆ ಸಂಬಂಧಿಸಿದ ಹಲವು ವಸ್ತುಗಳನ್ನು ಗುರುತಿಸಿದ್ದಾರೆ.

ಇದನ್ನೂ ಓದಿ: ಮಾಫಿ ಸಾಕ್ಷಿ ವಿಚಾರ; ನಟ ದರ್ಶನ್‌ಗೆ ಕೋರ್ಟ್‌ನಲ್ಲಿ ಹಿನ್ನಡೆ, ಸಲ್ಲಿಸಿದ್ದ 2 ಅರ್ಜಿಗಳು ವಜಾ

ಪೊಲೀಸರ ವಶದಲ್ಲಿರುವ ರೇಣುಕಸ್ವಾಮಿ (Renukaswamy Case) ಧರಿಸಿದ್ದ ಬಟ್ಟೆಗಳು, ಒಳ ಉಡುಪು, ಆರೋಪಿಗಳು ಬಳಸಿದ್ದ ಹಗ್ಗ ಹಾಗೂ ಕಬ್ಬಿಣದ ವಸ್ತುಗಳು ಸೇರಿದಂತೆ ಹಲವು ಸಾಕ್ಷ್ಯಗಳನ್ನು ಪ್ರದೂಷ್ ಗುರುತಿಸಿದ್ದಾರೆ. ರೇಣುಕಸ್ವಾಮಿ ಮೇಲೆ ದಾಳಿ ನಡೆಸಲು ಬಳಸಲಾಗಿದೆ ಎನ್ನಲಾದ ವಸ್ತುಗಳು ಹಾಗೂ ದರ್ಶನ್ ಧರಿಸಿದ್ದ ಶೂ ಸೇರಿದಂತೆ ಇತರ ವಸ್ತುಗಳನ್ನೂ ಅವರು ಗುರುತಿಸಿದ್ದಾರೆ.

ಇದರೊಂದಿಗೆ, ಪ್ರಕರಣದಲ್ಲಿ ಮುಂದಿನ ಪ್ರಮುಖ ಹಂತವಾದ ಪಾಟಿ ಸವಾಲು (Cross Examination) ಪ್ರಕ್ರಿಯೆ ತಕ್ಷಣ ನಡೆಯುವುದಿಲ್ಲ. ಹೈಕೋರ್ಟ್ 2026ರ ಸೆಪ್ಟೆಂಬರ್ 18ರಂದು ನೀಡಿರುವ ಆದೇಶದಂತೆ, ಅದಕ್ಕಾಗಿ ಪ್ರತ್ಯೇಕ ದಿನಾಂಕವನ್ನು ನಿಗದಿಪಡಿಸುವವರೆಗೆ ಪ್ರಕ್ರಿಯೆಯನ್ನು ನ್ಯಾಯಾಲಯ ಮುಂದೂಡಿದೆ.

ರೇಣುಕಾಸ್ವಾಮಿ ಕೇಸ್‌

ಹೈಕೋರ್ಟ್ ಆದೇಶದ ಪ್ರಕಾರ, ಪ್ರಕರಣದ ಪ್ರಮುಖ ಏಳು ಸಾಕ್ಷಿಗಳ ಮುಖ್ಯ ವಿಚಾರಣೆ ಮೊದಲು ಪೂರ್ಣಗೊಳ್ಳಬೇಕು. ಈ ಸಂದರ್ಭದಲ್ಲಿ ದರ್ಶನ್ ಸೇರಿದಂತೆ ಸಂಬಂಧಪಟ್ಟ ಆರೋಪಿಗಳು ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಬೇಕು. ನಂತರ ಪಾಟಿ ಸವಾಲಿಗೆ ಎರಡು ಅಥವಾ ಮೂರು ದಿನಗಳನ್ನು ಪ್ರತ್ಯೇಕವಾಗಿ ನಿಗದಿಪಡಿಸುವಂತೆ ಸೂಚಿಸಲಾಗಿದೆ. ಆ ದಿನಗಳಲ್ಲಿ ದರ್ಶನ್ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಅವಕಾಶವಿದೆ.

ಇದೇ ವೇಳೆ ದರ್ಶನ್ (Actor Darshan) ಪರ ವಕೀಲ ಹಷ್ಮತ್ ಪಾಷಾ ಅವರು ಮಹಜರು ಫೋಟೋಗಳನ್ನು ಗುರುತಿಸಿ ದಾಖಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತಕರಾರು ಸಲ್ಲಿಸಿದರು. ಮಾಫಿ ಸಾಕ್ಷಿಯ ಹೇಳಿಕೆ ವೇಳೆ ವ್ಯಕ್ತಪಡಿಸಿದ ಆಕ್ಷೇಪಣೆಗಳನ್ನು ದಾಖಲಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶವನ್ನು ಉಲ್ಲೇಖಿಸಿದರು.

ಇದನ್ನೂ ಓದಿ: ನಟ ದರ್ಶನ್ ಕೇಸ್‌ನಲ್ಲಿ ಕೋರ್ಟ್‌ ಖಡಕ್ ಆದೇಶ, ಪೊಲೀಸರ ಎಂಟ್ರಿಗೆ ಬ್ರೇಕ್! ಬಿಗ್ ಅಪ್ಡೇಟ್

ಇದಕ್ಕೆ ಸರ್ಕಾರಿ ಹಿರಿಯ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಮಹಜರು ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ಗುರುತಿಸಿ ದಾಖಲಿಸುವುದು ವಿಚಾರಣೆಯ ಭಾಗವಾಗಿದ್ದು, ಸಾಕ್ಷ್ಯಗಳ ಪ್ರಾಮುಖ್ಯತೆ ವಿಚಾರಣೆಯ ಸಂದರ್ಭದಲ್ಲಿ ನಿರ್ಧಾರವಾಗಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರದೂಷ್ ಅವರ ಸಾಕ್ಷ್ಯ ದಾಖಲಾತಿ ಮುಗಿದ ಹಿನ್ನೆಲೆಯಲ್ಲಿ ಗುರುವಾರದ ವಿಚಾರಣೆಗೆ ಪ್ರವಿತ್ರಾ ಗೌಡ, ದರ್ಶನ್, ಪ್ರದೂಷ್ ಸೇರಿದಂತೆ ನ್ಯಾಯಾಂಗ ಬಂಧನದಲ್ಲಿರುವ ಏಳು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿದೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories