ಸೌತೆಕಾಯಿ ಸಿಪ್ಪೆಯಲ್ಲೇ ಅಡಗಿದೆ ಆರೋಗ್ಯದ ರಹಸ್ಯ! ಆರೋಗ್ಯ ತಜ್ಞರು ಹೇಳಿದ ಸೀಕ್ರೆಟ್ ಇದು
ಬೇಸಿಗೆಯಲ್ಲಿ ದೇಹ ತಂಪಾಗಿಡಲು ಸೌತೆಕಾಯಿ ಹೆಚ್ಚು ಉಪಯುಕ್ತವಾಗಿದ್ದು, ಸಿಪ್ಪೆಯೊಂದಿಗೆ ಸೇವಿಸಿದರೆ ಫೈಬರ್, ವಿಟಮಿನ್ ಮತ್ತು ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ದೊರೆಯುತ್ತವೆ ಎಂದು ತಜ್ಞರು ಹೇಳಿದ್ದಾರೆ.

Cucumber Health Benefit: ಬೇಸಿಗೆಯ ಬಿಸಿಲಿನಲ್ಲಿ ದೇಹ ತಂಪಾಗಿಡಲು ಜನರು ಹೆಚ್ಚು ಹುಡುಕುವ ಆಹಾರಗಳಲ್ಲಿ ಸೌತೆಕಾಯಿ ಪ್ರಮುಖ ಸ್ಥಾನದಲ್ಲಿದೆ. ಸಲಾಡ್, ರೈತ ಅಥವಾ ಡಯಟ್ ಆಹಾರಗಳಲ್ಲಿ ಸಾಮಾನ್ಯವಾಗಿ ಬಳಸುವ ಈ ತರಕಾರಿ ದೇಹಕ್ಕೆ ತಂಪು ನೀಡುವುದರ ಜೊತೆಗೆ ಹೈಡ್ರೇಷನ್ ಕಾಪಾಡಲು ಸಹ ಸಹಾಯ ಮಾಡುತ್ತದೆ.
ಆದರೆ ಸೌತೆಕಾಯಿಯನ್ನು ಸಿಪ್ಪೆ ತೆಗೆದು ತಿನ್ನಬೇಕಾ ಅಥವಾ ಹಾಗೆಯೇ ಸೇವಿಸಬೇಕಾ ಎಂಬ ಪ್ರಶ್ನೆ ಹಲವರಲ್ಲಿ ಇರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಚೆನ್ನಾಗಿ ತೊಳೆದು ಸಿಪ್ಪೆಯೊಂದಿಗೆ ಸೌತೆಕಾಯಿ ಸೇವಿಸುವುದೇ ಉತ್ತಮ ಎಂದು ಸಲಹೆ ನೀಡಲಾಗಿದೆ.
ಸೌತೆಕಾಯಿ ಸಿಪ್ಪೆಯಲ್ಲಿ ಫೈಬರ್, ವಿಟಮಿನ್-K, ಆಂಟಿಆಕ್ಸಿಡೆಂಟ್ಸ್ ಹಾಗೂ ಸಿಲಿಕಾ ಅಂಶಗಳು ಸಮೃದ್ಧವಾಗಿವೆ. ಇವು ದೇಹದ ಆರೋಗ್ಯ ಕಾಪಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ಜೀರ್ಣಕ್ರಿಯೆ ಸುಧಾರಿಸಲು ಮತ್ತು ಹೊಟ್ಟೆ ತುಂಬಿದ ಅನುಭವ ನೀಡಲು ಸಹಕಾರಿ.
ಸಿಪ್ಪೆಯೊಂದಿಗೆ ಸೌತೆಕಾಯಿ ತಿನ್ನುವುದರಿಂದ ಹೆಚ್ಚು ಸಮಯ ಹಸಿವು ಕಾಣಿಸಿಕೊಳ್ಳುವುದಿಲ್ಲ. ಇದರಿಂದ ತೂಕ ನಿಯಂತ್ರಣಕ್ಕೂ ಸಹಾಯವಾಗಬಹುದು ಎಂದು ತಜ್ಞರು ಹೇಳಿದ್ದಾರೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಹೆಚ್ಚಾಗಿ ಸಿಪ್ಪೆಯಲ್ಲೇ ಇರುವುದರಿಂದ ಅದನ್ನು ತೆಗೆದುಹಾಕಬಾರದು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.
ಸೌತೆಕಾಯಿ ಸಿಪ್ಪೆಯಲ್ಲಿ ವಿಟಮಿನ್-A ಹಾಗೂ ಬೇಟಾ ಕ್ಯಾರೋಟಿನ್ ಅಂಶಗಳೂ ದೊರೆಯುತ್ತವೆ. ಇವು ಕಣ್ಣುಗಳ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಗೆ ಉತ್ತಮ ಎಂದು ಹೇಳಲಾಗುತ್ತದೆ.
ಆದರೆ ಮಕ್ಕಳು ಅಥವಾ ಹಿರಿಯರಿಗೆ ಸಿಪ್ಪೆ ಸ್ವಲ್ಪ ಗಟ್ಟಿಯಾಗಿರಬಹುದು. ಅಂತಹ ಸಂದರ್ಭಗಳಲ್ಲಿ ಸ್ವಲ್ಪ ಮಾತ್ರ ಸಿಪ್ಪೆ ತೆಗೆಯಬಹುದು ಅಥವಾ ಸಣ್ಣ ತುಂಡುಗಳಾಗಿ ಕತ್ತರಿಸಿ ನೀಡಬಹುದು. ಆದರೆ ಸಾಧ್ಯವಾದಷ್ಟು ಪೋಷಕಾಂಶ ಇರುವ ಭಾಗ ಉಳಿಸಿಕೊಳ್ಳುವುದು ಉತ್ತಮ.
ಸೌತೆಕಾಯಿಯನ್ನು ಸೇವಿಸುವ ಮೊದಲು ಸ್ವಚ್ಛವಾಗಿ ತೊಳೆಯುವುದು ಬಹಳ ಮುಖ್ಯ. ಸರಿಯಾದ ರೀತಿಯಲ್ಲಿ ಬಳಸಿದರೆ ಬೇಸಿಗೆಯಲ್ಲಿ ಇದು ಆರೋಗ್ಯಕ್ಕೆ ಅತ್ಯುತ್ತಮ ನೈಸರ್ಗಿಕ ಆಹಾರವಾಗಬಹುದು.



