ಹೆಚ್ಚು ಕೂಲ್‌ಡ್ರಿಂಕ್ಸ್ ಕುಡಿಯುತ್ತೀರಾ? ಈ ಭಯಾನಕ ಸತ್ಯ ಗೊತ್ತಾದರೆ ಇಂದೇ ಬಿಡ್ತೀರಾ
ಬೇಸಿಗೆಯ ತಾಪಮಾನದಿಂದ ತಪ್ಪಿಸಿಕೊಳ್ಳಲು ಸೋಡಾ, ಕೂಲ್‌ಡ್ರಿಂಕ್ಸ್ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇವು ದೇಹದ ಹೈಡ್ರೇಷನ್ ಕಡಿಮೆ ಮಾಡಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಬೇಸಿಗೆಯ ಬಿಸಿಲಿನಿಂದ ಬೇಸತ್ತು ಅನೇಕರು ತಂಪಾದ ಸೋಡಾ, ಕೂಲ್‌ಡ್ರಿಂಕ್ಸ್ ಅಥವಾ ಐಸ್ ಪಾನೀಯಗಳತ್ತ ಮುಖ ಮಾಡುತ್ತಾರೆ. ಇವು ಕುಡಿದ ತಕ್ಷಣ ದಾಹ ಕಡಿಮೆಯಾದ ಅನುಭವ ಸಿಗುತ್ತದೆ. ಆದರೆ ದೇಹಕ್ಕೆ ನಿಜವಾಗಿ ಬೇಕಾದ ಹೈಡ್ರೇಷನ್ ಸಿಗುತ್ತಿದೆಯೇ ಎಂಬ ಪ್ರಶ್ನೆಗೆ ವೈದ್ಯರು ಎಚ್ಚರಿಕೆಯ ಉತ್ತರ ನೀಡಿದ್ದಾರೆ.
ವೈದ್ಯರ ಪ್ರಕಾರ, ತಣ್ಣನೆಯ ಪಾನೀಯಗಳು ಕೆಲ ಕ್ಷಣಗಳ ಮಟ್ಟಿಗೆ ದೇಹಕ್ಕೆ ಶಾಂತಿ ನೀಡಿದರೂ ಅವು ದಾಹವನ್ನು ಸಂಪೂರ್ಣ ತಣಿಸುವುದಿಲ್ಲ. ತಂಪಿನ ಪರಿಣಾಮದಿಂದ ಮೆದುಳಿಗೆ ತಾತ್ಕಾಲಿಕ ತೃಪ್ತಿಯ ಸೂಚನೆ ಹೋಗುತ್ತದೆ. ಇದರಿಂದ ದೇಹಕ್ಕೆ ಇನ್ನೂ ನೀರಿನ ಅಗತ್ಯವಿದ್ದರೂ ಜನರು ಹೆಚ್ಚಾಗಿ ನೀರು ಕುಡಿಯುವುದನ್ನು ತಪ್ಪಿಸುತ್ತಾರೆ.
ಅಧಿಕ ಸಕ್ಕರೆ ಮತ್ತು ಕಾರ್ಬೊನೇಟ್ ಹೊಂದಿರುವ ಸಾಫ್ಟ್‌ಡ್ರಿಂಕ್ಸ್ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇವುಗಳಲ್ಲಿ ಇರುವ ಫ್ರಕ್ಟೋಸ್ ದೇಹದಲ್ಲಿ ಇನ್ಸುಲಿನ್ ಪ್ರತಿರೋಧ ಹೆಚ್ಚಿಸಿ ಟೈಪ್-2 ಡಯಾಬಿಟಿಸ್ ಹಾಗೂ ಫ್ಯಾಟಿ ಲಿವರ್ ಸಮಸ್ಯೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳಿದ್ದಾರೆ.
ಇದಲ್ಲದೆ, ಸಾಫ್ಟ್‌ಡ್ರಿಂಕ್ಸ್‌ನಲ್ಲಿ ಇರುವ ಆಸಿಡ್ ಅಂಶಗಳು ಹಲ್ಲಿನ ಮೇಲಿನ ಎನಾಮೆಲ್ ಹಾನಿಗೊಳಿಸಿ ಕ್ಯಾವಿಟಿ ಸಮಸ್ಯೆ ಉಂಟುಮಾಡುತ್ತವೆ. ಕೆಲ ಪಾನೀಯಗಳಲ್ಲಿ ಅಧಿಕ ಕ್ಯಾಫಿನ್ ಇರುವುದರಿಂದ ಹೃದಯ ಬಡಿತ ವೇಗವಾಗುವುದು, ಆತಂಕ, ನಿದ್ರಾಹೀನತೆ ಮುಂತಾದ ಸಮಸ್ಯೆಗಳು ಕಾಣಿಸಬಹುದು.
ವೈದ್ಯರು ಇನ್ನೊಂದು ಮಹತ್ವದ ಎಚ್ಚರಿಕೆಯನ್ನು ನೀಡಿದ್ದಾರೆ. ಬಿಸಿಲಿನಿಂದ ಮನೆಗೆ ಬಂದ ತಕ್ಷಣ ತುಂಬಾ ತಣ್ಣನೆಯ ನೀರು ಅಥವಾ ಐಸ್‌ಡ್ರಿಂಕ್ಸ್ ಕುಡಿಯುವುದು ದೇಹಕ್ಕೆ ತಕ್ಷಣದ ಟೆಂಪರೇಚರ್ ಶಾಕ್ ನೀಡಬಹುದು. ಇದರಿಂದ ತಲೆ ಸುತ್ತು, ಎದೆ ಬಿಗಿತ ಅಥವಾ ಬ್ರೈನ್ ಫ್ರೀಜ್ ಸಮಸ್ಯೆಯೂ ಉಂಟಾಗುವ ಸಾಧ್ಯತೆ ಇದೆ.
ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿಡಲು ಸಾಮಾನ್ಯ ನೀರು, ಮಜ್ಜಿಗೆ, ತೆಂಗಿನಕಾಯಿ ನೀರು ಹಾಗೂ ನೈಸರ್ಗಿಕ ಹಣ್ಣಿನ ರಸಗಳನ್ನು ಸೇವಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ. ದಿನವಿಡೀ ಸ್ವಲ್ಪಸ್ವಲ್ಪವಾಗಿ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಂಡರೆ ದೇಹ ಆರೋಗ್ಯಕರವಾಗಿರುತ್ತದೆ ಎಂದು ತಿಳಿಸಿದ್ದಾರೆ.



