ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಮುನ್ನ ತಿಳಿದುಕೊಳ್ಳಿ! ಇಲ್ಲದಿದ್ದರೆ ಸಮಸ್ಯೆ ಖಚಿತ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹೆಚ್ಚು ನೀರು ಕುಡಿಯುವುದು ಆರೋಗ್ಯಕರವೆಂದು ಹಲವರು ನಂಬುತ್ತಾರೆ. ಆದರೆ ಸರಿಯಾದ ವಿಧಾನದಲ್ಲಿ ಕುಡಿಯದಿದ್ದರೆ ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರ ಎಚ್ಚರಿಕೆ.

Drinking Water on Empty Stomach: ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಅರಿವು ಹೆಚ್ಚಾದಂತೆ, ಹಲವರು ಬೆಳಿಗ್ಗೆ ನಿದ್ರೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಹೆಚ್ಚು ನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ. ದೇಹಕ್ಕೆ ನೀರು ಅಗತ್ಯವಾಗಿದ್ದು ಸತ್ಯ. ಆದರೆ ಒಂದೇ ಸಲ ಲೀಟರ್‌ಗಳಷ್ಟು ನೀರನ್ನು ಕುಡಿಯುವುದು ಆರೋಗ್ಯಕ್ಕೆ ಯಾವಾಗಲೂ ಲಾಭಕರವಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ನೀರು ಕುಡಿಯುವುದರಿಂದ ಮಾತ್ರ ದೇಹಕ್ಕೆ ಪ್ರಯೋಜನ ಸಿಗುತ್ತದೆ. ಇಲ್ಲದಿದ್ದರೆ ಕೆಲವು ಸಮಸ್ಯೆಗಳು ಎದುರಾಗಬಹುದು.

ಜೀರ್ಣಕ್ರಿಯೆಗೆ ತೊಂದರೆ ಆಗುವ ಸಾಧ್ಯತೆ

ಬೆಳಗಿನ ಸಮಯದಲ್ಲಿ ನಮ್ಮ ದೇಹದ ಜೀರ್ಣಕ್ರಿಯೆ ನಿಧಾನವಾಗಿರುತ್ತದೆ. ಆ ಸಮಯದಲ್ಲಿ ಏಕಾಏಕಿ ಹೆಚ್ಚು ಪ್ರಮಾಣದ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಇನ್ನಷ್ಟು ನಿಧಾನವಾಗುವ ಸಾಧ್ಯತೆ ಇದೆ.

ಇದರಿಂದ ನಾವು ತಿನ್ನುವ ಉಪಾಹಾರ ಸರಿಯಾಗಿ ಜೀರ್ಣವಾಗದೇ ಹೊಟ್ಟೆಯಲ್ಲಿ ಭಾರವಾಗಿರುವಂತೆ ಕಾಣಬಹುದು. ಕೆಲವರಿಗೆ ಅಜೀರ್ಣ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೂ ಕಾರಣವಾಗಬಹುದು.

ಹೊಟ್ಟೆ ಉಬ್ಬರ ಮತ್ತು ಹಸಿವು ಕಡಿಮೆ

ಒಂದೇ ಬಾರಿ ಹೆಚ್ಚು ನೀರು ಕುಡಿಯುವುದರಿಂದ ಹೊಟ್ಟೆಯ ಮೇಲೆ ಒತ್ತಡ ಹೆಚ್ಚಾಗಬಹುದು. ಇದರಿಂದ ಹೊಟ್ಟೆ ತುಂಬಿರುವ ಅನುಭವವಾಗುವುದು, ಹಸಿವು ಕಡಿಮೆಯಾಗುವುದು ಅಥವಾ ಅಸ್ವಸ್ಥತೆ ಉಂಟಾಗುವುದು ಸಾಮಾನ್ಯ.

ಕೆಲವರಲ್ಲಿ ಇದರಿಂದ ಹೊಟ್ಟೆ ನೋವು, ವಾಂತಿ ಆಗುವಂತಹ ಭಾವನೆ ಕೂಡ ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ನೀರು ಕುಡಿಯುವ ಸರಿಯಾದ ವಿಧಾನ

ಆಯುರ್ವೇದದ ಪ್ರಕಾರ ನೀರನ್ನು ಯಾವಾಗಲೂ ಮಿತಿಯಲ್ಲಿ ಸೇವಿಸುವುದು ಮುಖ್ಯ. ಬೆಳಿಗ್ಗೆ ಎದ್ದ ತಕ್ಷಣ ಲೀಟರ್‌ಗಳಷ್ಟು ನೀರು ಕುಡಿಯುವುದಕ್ಕಿಂತ, ಸ್ವಲ್ಪ ಸ್ವಲ್ಪವಾಗಿ ಕುಡಿಯುವುದು ಉತ್ತಮ.

ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಆರೋಗ್ಯಕರ. ಜೊತೆಗೆ ನೀರನ್ನು ನಿಂತುಕೊಂಡು ಕುಡಿಯುವುದಕ್ಕಿಂತ ಕುಳಿತು ನಿಧಾನವಾಗಿ ಸಿಪ್ ಮಾಡಿಕೊಂಡು ಕುಡಿಯಬೇಕು.

ಋತುವಿನ ಪ್ರಕಾರ ನೀರಿನ ಬಳಕೆ

ಚಳಿಗಾಲದಲ್ಲಿ ಬೆಚ್ಚಗಿನ ನೀರನ್ನು ಸೇವಿಸುವುದು ಉತ್ತಮ. ಬೇಸಿಗೆಯಲ್ಲಿ ಕೊಠಡಿ ತಾಪಮಾನದಲ್ಲಿರುವ ನೀರು ದೇಹಕ್ಕೆ ಸೂಕ್ತವಾಗುತ್ತದೆ.

ಫ್ರಿಜ್‌ನ ತಣ್ಣನೆಯ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಸೂಚಿಸುತ್ತಾರೆ. ದಿನಪೂರ್ತಿ ಸ್ವಲ್ಪಸ್ವಲ್ಪವಾಗಿ ನೀರು ಕುಡಿಯುವುದು ದೇಹದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.

Ramya

Sub Editor, Cinema, Health & Lifestyle : 👤 Ramya is a journalist with five years of experience in… More »

Related Stories