ಇನ್ಮುಂದೆ ರೈತರ ಖಾತೆಗೆ ಯೂರಿಯಾ ಸಬ್ಸಿಡಿ ನೇರ ಜಮೆ, ಕೇಂದ್ರದಿಂದ ಬಂಪರ್ ಸುದ್ದಿ

Union Budget 2026: ಕೇಂದ್ರ ಆರ್ಥಿಕ ಸಮೀಕ್ಷೆಯಲ್ಲಿ ಯೂರಿಯಾ ಸಬ್ಸಿಡಿ ರೈತರ ಖಾತೆಗೆ ನೇರ ಜಮೆ, ಗಿಗ್ ಕಾರ್ಮಿಕರಿಗೆ ಕನಿಷ್ಠ ವೇತನ ಶಿಫಾರಸು ಸೇರಿ ಆರ್ಥಿಕ ಬೆಳವಣಿಗೆ, ಕೃಷಿ ಉತ್ಪಾದನೆ, ಉದ್ಯೋಗ ಸ್ಥಿತಿಗತಿ ಕುರಿತು ಪ್ರಮುಖ ಅಂಶಗಳು ಬಹಿರಂಗ ಆಗಿವೆ

  • ಯೂರಿಯಾ ಸಬ್ಸಿಡಿ ರೈತರ ಖಾತೆಗೆ ನೇರ ಜಮೆ ಸೂಚನೆ
  • ಗಿಗ್ ಕಾರ್ಮಿಕರಿಗೆ ಕನಿಷ್ಠ ವೇತನ ವ್ಯವಸ್ಥೆ ತರಲು ಶಿಫಾರಸು
  • ಕೃಷಿ ಉತ್ಪಾದನೆ, ಉದ್ಯೋಗ ಸ್ಥಿತಿ ಕುರಿತು ಆರ್ಥಿಕ ಸಮೀಕ್ಷೆ

Union Budget 2026: ಕೇಂದ್ರ ಬಜೆಟ್‌ಗೆ ಮುನ್ನ ಬಿಡುಗಡೆಯಾದ ಆರ್ಥಿಕ ಸಮೀಕ್ಷೆ ದೇಶದ ಆರ್ಥಿಕ ಸ್ಥಿತಿಗತಿಯನ್ನಷ್ಟೇ ಅಲ್ಲದೆ, ಮುಂದಿನ ನೀತಿ ನಿರ್ಧಾರಗಳ ದಿಕ್ಕನ್ನೂ ಸೂಚಿಸಿದೆ. ಗುರುವಾರ ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025–26ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದು, ರೈತರು ಮತ್ತು ಗಿಗ್ ಕಾರ್ಮಿಕರಿಗೆ ಸಂಬಂಧಿಸಿದ ಮಹತ್ವದ ಶಿಫಾರಸುಗಳು ಗಮನ ಸೆಳೆದಿವೆ.

ಜಾಗತಿಕ ಆರ್ಥಿಕ ಅಸ್ಥಿರತೆ ನಡುವೆಯೂ ದೇಶದ ಜಿಡಿಪಿ ವೃದ್ಧಿ ಬಲವಾಗಿರುವುದಾಗಿ ಸಮೀಕ್ಷೆ ಹೇಳಿದೆ. ಇದೇ ವೇಳೆ 2024–25ರಲ್ಲಿ ಆಹಾರ ಧಾನ್ಯ ಉತ್ಪಾದನೆ 357.73 ಮಿಲಿಯನ್ ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ ಎಂಬ ಅಂಶವನ್ನು ಉಲ್ಲೇಖಿಸಿದೆ. ಪಿಎಂ-ಕಿಸಾನ್ ಯೋಜನೆಯಡಿ ಇದುವರೆಗೆ ರೈತರಿಗೆ ₹4.09 ಲಕ್ಷ ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂಬುದನ್ನೂ ಸಮೀಕ್ಷೆ ದಾಖಲಿಸಿದೆ.

ಯೂರಿಯಾ ಸಬ್ಸಿಡಿಗೆ ಹೊಸ ದಾರಿ

ಯೂರಿಯಾ ಬೆಲೆ ಏರಿಕೆಯಿಂದ ರೈತರಿಗೆ ಹೊರೆ ಹೆಚ್ಚುತ್ತಿರುವ ಹಿನ್ನೆಲೆ, ಸರ್ಕಾರ ನೀಡುವ ಸಬ್ಸಿಡಿಯನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ (Bank Account) ಜಮೆ ಮಾಡುವಂತೆ ಆರ್ಥಿಕ ಸಮೀಕ್ಷೆ ಶಿಫಾರಸು ಮಾಡಿದೆ. ಇದರಿಂದ ಸೋರಿಕೆ ಕಡಿಮೆಯಾಗುತ್ತದೆ ಹಾಗೂ ಸಹಾಯ ನೇರವಾಗಿ ಫಲಾನುಭವಿಗೆ ತಲುಪುತ್ತದೆ ಎನ್ನುವುದು ಸಮೀಕ್ಷೆಯ ಅಭಿಪ್ರಾಯ.

ಗಿಗ್ ಕಾರ್ಮಿಕರ ಆದಾಯ ಅಂತರಕ್ಕೆ ಪರಿಹಾರ?

ದೇಶದಲ್ಲಿ ಸುಮಾರು 40 ಶೇಕಡಾ ಗಿಗ್ ಕಾರ್ಮಿಕರು ತಿಂಗಳಿಗೆ ₹15,000ಕ್ಕಿಂತ ಕಡಿಮೆ ಆದಾಯ ಗಳಿಸುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಗಂಟೆ ಆಧಾರಿತ ಅಥವಾ ಪೂರ್ಣಕಾಲಿಕ ಕನಿಷ್ಠ ವೇತನ ವ್ಯವಸ್ಥೆ ತರಬೇಕೆಂದು ಸಲಹೆ ನೀಡಲಾಗಿದೆ. ಇದರಿಂದ ಗಿಗ್ ಉದ್ಯೋಗ ಮತ್ತು ಸಾಮಾನ್ಯ ಉದ್ಯೋಗಗಳ ನಡುವಿನ ವೇತನ ಅಂತರ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಕೃಷಿ ರಫ್ತು ನೀತಿಗಳಲ್ಲಿ ಆಗಾಗ್ಗೆ ನಡೆಯುವ ಬದಲಾವಣೆಗಳು ಭಾರತದ ರಫ್ತು ಕ್ಷೇತ್ರಕ್ಕೆ ಸವಾಲಾಗುತ್ತಿವೆ ಎಂಬ ಎಚ್ಚರಿಕೆಯನ್ನೂ ಸಮೀಕ್ಷೆ ನೀಡಿದೆ. ಸರಬರಾಜು ನಿರ್ಬಂಧಗಳು ವಿದೇಶಿ ಖರೀದಿದಾರರನ್ನು ಇತರ ದೇಶಗಳತ್ತ ತಳ್ಳುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ, ಜನವರಿ 2026ರ ವೇಳೆಗೆ ಈ-ಶ್ರಮ್ ಪೋರ್ಟಲ್‌ನಲ್ಲಿ 310 ಮಿಲಿಯನ್ ಕಾರ್ಮಿಕರು ನೋಂದಾಯಿತರಾಗಿದ್ದಾರೆ ಎಂಬ ಅಂಶವೂ ದಾಖಲಿಸಲಾಗಿದೆ.

English Summary▼

Ramya

Sub Editor, Cinema, Health & Lifestyle : 👤 Ramya is a journalist with five years of experience in… More »

Related Stories