ವಿಟಮಿನ್‌ಗಳ ಪವರ್‌ಹೌಸ್ ಪಪ್ಪಾಯಿ! ತಿಂದರೆ ಚರ್ಮ, ಕೂದಲು, ಆರೋಗ್ಯ ಎಲ್ಲವೂ ಸೂಪರ್
ಪಪ್ಪಾಯಿ ಹಣ್ಣು ದೇಹಕ್ಕೆ ಹಲವು ರೀತಿಯ ಆರೋಗ್ಯ ಲಾಭ ನೀಡುವುದರ ಜೊತೆಗೆ ಎಲುಬು ಬಲಪಡಿಸಲು, ಕೂದಲು ಉದುರುವಿಕೆ ಕಡಿಮೆ ಮಾಡಲು ಹಾಗೂ ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ ಎಂದು ತಜ್ಞರು ತಿಳಿಸಿದ್ದಾರೆ.

Papaya Benefits for Health: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾದ ಆಹಾರಗಳಲ್ಲಿ ಒಂದಾಗಿದೆ. ಸಿಹಿ ರುಚಿ ಮತ್ತು ರಸಭರಿತ ಗುಣ ಹೊಂದಿರುವ ಈ ಹಣ್ಣು ದೇಹಕ್ಕೆ ಬೇಕಾದ ಹಲವು ವಿಟಮಿನ್‌ಗಳು ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ. ಆರೋಗ್ಯ ತಜ್ಞರು ಹಾಗೂ ಆಯುಷ್ ಇಲಾಖೆ ಕೂಡ ಪಪ್ಪಾಯಿ ನಿಯಮಿತವಾಗಿ ಸೇವಿಸುವಂತೆ ಸಲಹೆ ನೀಡುತ್ತಿದೆ.
ಪಪ್ಪಾಯಿಯಲ್ಲಿ ವಿಟಮಿನ್ A, C, E, ಫೋಲೇಟ್, ಪೊಟ್ಯಾಸಿಯಂ ಮತ್ತು ಫೈಬರ್ ಸಮೃದ್ಧವಾಗಿದೆ. ಇವು ದೇಹವನ್ನು ಚುರುಕುಗೊಳಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ವಿಶೇಷವಾಗಿ ವೈರಲ್ ಸೋಂಕುಗಳು, ಜ್ವರ ಹಾಗೂ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಲು ಪಪ್ಪಾಯಿ ನೆರವಾಗುತ್ತದೆ.
ಈ ಹಣ್ಣು ಜೀರ್ಣಕ್ರಿಯೆ ಸುಧಾರಿಸುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ. ಪಪ್ಪಾಯಿಯಲ್ಲಿ ಇರುವ ‘ಪಪೈನ್’ ಎಂಜೈಮ್ ಆಹಾರ ಸುಲಭವಾಗಿ ಜೀರ್ಣವಾಗಲು ಸಹಕಾರಿ. ಇದರಿಂದ ಗ್ಯಾಸ್ಟ್ರಿಕ್, ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆಗಳು ಕಡಿಮೆಯಾಗುತ್ತವೆ. ನಿಯಮಿತ ಸೇವನೆಯಿಂದ ಹೊಟ್ಟೆಯ ಆರೋಗ್ಯ ಉತ್ತಮವಾಗಿರುತ್ತದೆ.
ಪಪ್ಪಾಯಿ ಎಲುಬುಗಳ ಬಲವರ್ಧನೆಗೂ ಸಹಕಾರಿ ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿ ಇರುವ ವಿಟಮಿನ್ K ಹಾಗೂ ಕ್ಯಾಲ್ಸಿಯಂ ಅಂಶಗಳು ಎಲುಬಿನ ದಟ್ಟತೆಯನ್ನು ಹೆಚ್ಚಿಸಿ, ಆಸ್ಟಿಯೋಪೊರೋಸಿಸ್ ಸಮಸ್ಯೆಯ ಅಪಾಯ ಕಡಿಮೆ ಮಾಡಲು ನೆರವಾಗುತ್ತವೆ. ಹಿರಿಯರು ಮತ್ತು ಮಹಿಳೆಯರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿ.
ಕೇವಲ ದೇಹದ ಆರೋಗ್ಯ ಮಾತ್ರವಲ್ಲ, ಪಪ್ಪಾಯಿ ಕೂದಲಿನ ಆರೈಕೆಯಲ್ಲೂ ಉಪಯುಕ್ತವಾಗಿದೆ. ಇದರಲ್ಲಿ ಇರುವ ವಿಟಮಿನ್ A ಮತ್ತು E ಕೂದಲಿನ ಬೇರುಗಳಿಗೆ ಪೋಷಣೆ ನೀಡುತ್ತವೆ. ಇದರಿಂದ ಕೂದಲು ಉದುರುವಿಕೆ ಕಡಿಮೆಯಾಗಿ, ಕೂದಲು ಗಟ್ಟಿಯಾಗಿ ಹಾಗೂ ಹೊಳಪಿನಿಂದ ಬೆಳೆಯಲು ಸಹಾಯವಾಗುತ್ತದೆ. ತಲೆಹೊಟ್ಟು ಸಮಸ್ಯೆ ನಿಯಂತ್ರಣಕ್ಕೂ ಇದು ನೆರವಾಗುತ್ತದೆ.
ಚರ್ಮದ ಆರೈಕೆಯಲ್ಲೂ ಪಪ್ಪಾಯಿ ಮಹತ್ವದ್ದಾಗಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಚರ್ಮವನ್ನು ಮೃದುವಾಗಿಸಿ ಕಾಂತಿ ಹೆಚ್ಚಿಸುತ್ತವೆ. ಮೊಡವೆ, ಕಲೆಗಳು ಹಾಗೂ ವಯೋಸಹಜ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಕಾರಿ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



