ಅನ್ನ ಮತ್ತು ಚಪಾತಿ, ಆರೋಗ್ಯಕ್ಕೆ ಯಾವುದು ಉತ್ತಮ ಆಯ್ಕೆ? ವೈದ್ಯರ ಸಲಹೆ ಏನು
ಇತ್ತೀಚಿನ ದಿನಗಳಲ್ಲಿ ಹೃದಯ ಸಮಸ್ಯೆಗಳು ಹೆಚ್ಚುತ್ತಿರುವ ನಡುವೆ ಅನ್ನ ಮತ್ತು ಚಪಾತಿ ಬಗ್ಗೆ ಚರ್ಚೆ ಮತ್ತೆ ಜೋರಾಗಿದೆ. ದೇಹದ ತೂಕ, ಶುಗರ್ ಮತ್ತು ಕೊಲೆಸ್ಟ್ರಾಲ್ ಮೇಲೆ ಯಾವ ಆಹಾರ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ಭಾರತೀಯರ ದಿನನಿತ್ಯದ ಆಹಾರದಲ್ಲಿ ಅನ್ನ ಮತ್ತು ಚಪಾತಿ ಎರಡಕ್ಕೂ ವಿಶೇಷ ಸ್ಥಾನವಿದೆ. ಕೆಲವರು ಅನ್ನವಿಲ್ಲದೆ ಊಟವೇ ಆಗುವುದಿಲ್ಲ ಎಂದು ಹೇಳಿದರೆ, ಇನ್ನೂ ಕೆಲವರು ಆರೋಗ್ಯಕ್ಕಾಗಿ ಚಪಾತಿಯನ್ನೇ ಆಯ್ಕೆ ಮಾಡುತ್ತಾರೆ. ಆದರೆ ಹೃದಯ ಆರೋಗ್ಯದ ದೃಷ್ಟಿಯಿಂದ ನೋಡಿದರೆ, ಯಾವುದು ಉತ್ತಮ ಎಂಬ ಪ್ರಶ್ನೆ ಈಗ ಹೆಚ್ಚು ಚರ್ಚೆಯಾಗುತ್ತಿದೆ.
ಫೈಬರ್ ಅಂಶದಲ್ಲಿ ಚಪಾತಿಗೆ ಮುನ್ನಡೆ
ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಆಹಾರದಲ್ಲಿ ಫೈಬರ್ ಅಂಶ ಬಹಳ ಮುಖ್ಯ. ಗೋಧಿ ಹಿಟ್ಟಿನಿಂದ ತಯಾರಿಸುವ ಚಪಾತಿಯಲ್ಲಿ ಫೈಬರ್ ಪ್ರಮಾಣ ಹೆಚ್ಚಿರುತ್ತದೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆದರೆ ಹೆಚ್ಚು ಪಾಲಿಶ್ ಮಾಡಿದ ಬಿಳಿ ಅಕ್ಕಿಯಲ್ಲಿ ಫೈಬರ್ ಅಂಶ ತುಂಬಾ ಕಡಿಮೆ. ಇದರಿಂದ ದೇಹದಲ್ಲಿ ಕೊಬ್ಬು ಸಂಗ್ರಹವಾಗುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಗ್ಲೈಸೆಮಿಕ್ ಇಂಡೆಕ್ಸ್ ಕೂಡ ಮುಖ್ಯ
ಬಿಳಿ ಅನ್ನ ಬೇಗ ಜೀರ್ಣವಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ತಕ್ಷಣ ಏರಿಕೆಯಾಗಬಹುದು. ವಿಶೇಷವಾಗಿ ಡಯಾಬಿಟಿಸ್ ಮತ್ತು ಹೃದಯ ಸಮಸ್ಯೆ ಇರುವವರು ಆಹಾರ ಆಯ್ಕೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು.
ಚಪಾತಿಯಲ್ಲಿರುವ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ನಿಧಾನವಾಗಿ ಶಕ್ತಿ ಬಿಡುಗಡೆ ಮಾಡುತ್ತದೆ. ಇದರಿಂದ ದೇಹ ಹೆಚ್ಚು ಸಮಯ ಚುರುಕಾಗಿರುತ್ತದೆ ಮತ್ತು ಹಸಿವು ಕೂಡ ತಡವಾಗಿ ಕಾಣಿಸುತ್ತದೆ.
ತೂಕ ನಿಯಂತ್ರಣಕ್ಕೂ ಸಹಕಾರಿ
ಹೆಚ್ಚಿನ ತೂಕ ಹೃದಯದ ಮೇಲೆ ಒತ್ತಡ ಹೆಚ್ಚಿಸುತ್ತದೆ. ಅನ್ನ ತಿಂದ ಕೆಲವೇ ಗಂಟೆಗಳಲ್ಲಿ ಮತ್ತೆ ಹಸಿವು ಕಾಣಿಸಿಕೊಳ್ಳಬಹುದು. ಇದರಿಂದ ಹೆಚ್ಚುವರಿ ಕ್ಯಾಲೊರಿ ಸೇವನೆ ಆಗುವ ಸಾಧ್ಯತೆ ಇದೆ.
ಆದರೆ ಚಪಾತಿ ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚು ಸಮಯ ಉಳಿಸುತ್ತದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇದು ಉತ್ತಮ ಆಯ್ಕೆಯಾಗಿ ಪರಿಗಣಿಸಲಾಗುತ್ತದೆ.
ಮಲ್ಟಿಗ್ರೇನ್ ಚಪಾತಿ ಇನ್ನೂ ಉತ್ತಮ
ಆರೋಗ್ಯ ತಜ್ಞರ ಪ್ರಕಾರ, ಕೇವಲ ಗೋಧಿ ಮಾತ್ರವಲ್ಲದೆ ಜೋಳ, ರಾಗಿ, ಸಜ್ಜೆ ಅಥವಾ ಓಟ್ಸ್ ಸೇರಿಸಿ ತಯಾರಿಸಿದ ಮಲ್ಟಿಗ್ರೇನ್ ಚಪಾತಿಗಳು ಇನ್ನಷ್ಟು ಪೌಷ್ಟಿಕಾಂಶ ಒದಗಿಸುತ್ತವೆ.
ಅನ್ನ ತಿನ್ನುವವರು ಬಿಳಿ ಅಕ್ಕಿಯ ಬದಲು ಬ್ರೌನ್ ರೈಸ್ ಬಳಸುವುದು ಉತ್ತಮ. ಜೊತೆಗೆ ಊಟದ ತಟ್ಟೆಯಲ್ಲಿ ತರಕಾರಿ, ಸೊಪ್ಪು ಮತ್ತು ಬೇಳೆ ಪದಾರ್ಥಗಳಿಗೆ ಹೆಚ್ಚು ಸ್ಥಾನ ನೀಡಬೇಕು ಎಂದು ಸಲಹೆ ನೀಡಲಾಗಿದೆ.



